ಕೋಠಿ

	ನೇರ ವಿಕ್ರಯದ ಉದ್ದೇಶದಿಂದ ವ್ಯಾಪಾರಸ್ಥಳದಲ್ಲಿ ಸರಕು ಶೇಖರಿಸಿಡಲು ಮಾಡಿದ ವ್ಯವಸ್ಥೆ; ಮಂಡಿ; ಭಂಡಾರ. ಕಾರ್ಖಾನೆಯವರು ಕೊಂಡ ಸರಕನ್ನು ಉಗ್ರಾಣಕ್ಕೆ ಸೇರಿಸುವ ಮುನ್ನ ಸ್ವೀಕರಿಸಿಡುವ ಸ್ಥಳವನ್ನೂ ಕೋಠಿಯೆಂದು ಕರೆಯುವುದುಂಟು. ಕೋಠಿಯ ಇಂಗ್ಲಿಷ್ ಸಮಾನಪದವಾದ ಡಿಪೋ ಎಂಬುದನ್ನು ಸರಕಿನ ಅಥವಾ ಪ್ರಯಾಣಿಕರ ರೈಲ್ವೆ ಅಥವಾ ಬಸ್ ನಿಲ್ದಾಣ ಎಂಬ ಅರ್ಥದಲ್ಲೂ ಬಳಸಲಾಗುತ್ತದೆ. ಬ್ರಿಟನಿನಲ್ಲೂ ಈ ಪದವನ್ನು ಈ ಅರ್ಥದಲ್ಲಿ ಬಳಸುವುದುಂಟು. ಆದರೆ ಅಲ್ಲಿ ಸರಕಿನ ಸಾರಿಗೆ ನಿಲ್ದಾಣಕ್ಕೆ ಮಾತ್ರ ಇದು ಸೀಮಿತವಾಗಿರುತ್ತದೆ. ಸೈನ್ಯಕ್ಕೆ ಅಗತ್ಯವಾದ ಸರಬರಾಯಿಯನ್ನು ಸಂಗ್ರಹಿಸಿಡುವ ಕೇಂದ್ರವನ್ನು ಈ ಹೆಸರಿನಿಂದ ಕರೆಯುವ ವಾಡಿಕೆಯುಂಟು. ದೊಡ್ಡ ದೊಡ್ಡ ಕೋಠಿಗಳು ಸರಬರಾಯಿಯನ್ನು ಶೇಖರಿಸಿಡುವುದರ ಜೊತೆಗೆ ಅದನ್ನು ವರ್ಗೀಕರಿಸುವ, ದುರಸ್ತಿನಲ್ಲಿಡುವ, ಹಾನಿಗೊಳಗಾದ ಸಾಮಗ್ರಿಯನ್ನು ರಕ್ಷಿಸುವ, ಸೈನಿಕರಿಗೆ ಅವಶ್ಯವಾದ ವಸ್ತುಗಳನ್ನೊದಗಿಸುವ ಕಾರ್ಯವನ್ನು ಕೂಡ ನಿರ್ವಹಿಸುತ್ತವೆ. ಸೈನ್ಯದ ನೂತನ ಪ್ರವೇಶಿಗಳಿಗೆ ಪೂರ್ವಭಾವಿ ತರಬೇತು ನೀಡುವ ಕೇಂದ್ರಕ್ಕೂ ಡಿಪೋ ಎಂದು ಕರೆಯುತ್ತಾರೆ, ಭಾರತಕ್ಕೆ ಬಂದ ಈಸ್ಟ್ ಇಂಡಿಯ ಕಂಪನಿಯೇ ಮುಂತಾದ ಪಾಶ್ಚಾತ್ಯ ವ್ಯಾಪಾರ ಸಂಸ್ಥೆಗಳು ದೇಶದ ಹಲವು ಸ್ಥಳಗಳಲ್ಲಿ ಕೋಠಿಗಳನ್ನು ಸ್ಥಾಪಿಸಿಕೊಂಡಿದ್ದುವು.   				 				*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ